ಭಾರತೀಯ ಪರಂಪರೆಯಲ್ಲಿ ದೀಪಾವಳಿ ಎಂದರೆ ಕೇವಲ ಬೆಳಕಿನ ಹಬ್ಬವಲ್ಲ — ಅದು ಆತ್ಮಶುದ್ಧಿಯ ಸಂಧಿ ಕಾಲ. ಬೆಳಕಿನ ಹಬ್ಬವು ಕತ್ತಲೆಯನ್ನು ಮಾತ್ರ ಅಲ್ಲ, ಅಜ್ಞಾನ, ನಕಾರಾತ್ಮಕತೆ ಮತ್ತು ಅಶುದ್ಧತೆಯನ್ನೂ ದೂರ ಮಾಡುವ ಹಬ್ಬವಾಗಿದೆ.ಈ ಹಬ್ಬದ ಬೆಳಗ್ಗೆ ಆಚರಿಸಲಾಗುವ ಒಂದು ಅತ್ಯಂತ ಮಹತ್ವದ ಸಂಪ್ರದಾಯವೇ ಅಭ್ಯಂಗ ಸ್ನಾನ.
ಅಭ್ಯಂಗ ಎಂದರೇನು?
‘ಅಭ್ಯಂಗ’ ಎಂಬ ಪದವು ಸಂಸ್ಕೃತದ “ಅಭಿ” (ಸಂಪೂರ್ಣವಾಗಿ) ಮತ್ತು “ಅಂಗ” (ದೇಹ) ಎಂಬ ಪದಗಳಿಂದ ಬಂದಿದೆ. ಅರ್ಥಾತ್, ದೇಹದ ಪ್ರತಿಯೊಂದು ಅಂಗವನ್ನೂ ಪ್ರೀತಿ ಮತ್ತು ಆರೈಕೆಯಿಂದ ಎಣ್ಣೆ ಹಚ್ಚುವುದು. ಇದು ಕೇವಲ ಸೌಂದರ್ಯ ಕ್ರಮವಲ್ಲ — ಇದು , ಆಯುರ್ವೇದದಲ್ಲಿನ ದೈನಂದಿನ ಆಚರಣೆ (ದಿನಚರ್ಯೆ)ಗಳಲ್ಲಿ ಒಂದು ಅತ್ಯಂತ ಪವಿತ್ರ ವಿಧಾನ. ಎಳ್ಳಿನ ಎಣ್ಣೆ, ತೆಂಗಿನ ಎಣ್ಣೆ ಅಥವಾ ಔಷಧೀಯ ಎಣ್ಣೆಗಳನ್ನು ಸ್ವಲ್ಪ ಉಷ್ಣಗೊಳಿಸಿ ದೇಹಕ್ಕೆ ಹಚ್ಚುವುದರಿಂದ,ದೇಹದ ರೋಗನಿರೋಧಕ ಶಕ್ತಿ, ರಕ್ತಸಂಚಾರ, ನರಶಕ್ತಿ, ಮತ್ತು ಚರ್ಮದ ಕಾಂತಿ ಎಲ್ಲವೂ ಸುಧಾರಿಸುತ್ತವೆ.
ದೀಪಾವಳಿಯ ಅಭ್ಯಂಗ ಸ್ನಾನದ ಶಾಸ್ತ್ರೀಯ ಮತ್ತು ಸಂಪ್ರದಾಯಿಕ ಅರ್ಥ!
ದೀಪಾವಳಿಯ ದಿನ ಅಭ್ಯಂಗ ಸ್ನಾನ ಮಾಡುವುದು ಪಾಪನಾಶಕ ಮತ್ತು ಪುಣ್ಯಕರ ಎಂದು ಪುರಾಣಗಳಲ್ಲಿ ಹೇಳಲಾಗಿದೆ.
ಲಕ್ಷ್ಮೀ ದೇವಿಯನ್ನು ಸ್ವಾಗತಿಸಲು ಶರೀರ ಮತ್ತು ಮನಸ್ಸನ್ನು ಶುದ್ಧಗೊಳಿಸುವುದೇ ಇದರ ಉದ್ದೇಶ.
ಪುರಾಣಗಳಲ್ಲಿ ಹೇಳುವಂತೆ —
“ದೀಪಾವಲ್ಯಾಂ ಪ್ರಭಾತೇ ತು ಯಃ ಕೃತ್ವಾ ತೈಲಮಭ್ಯಂಗನಮ್,
ಸ್ನಾನಂ ಚ ಸುಖದಂ ನೃಣಾಂ ದೀರ್ಘಾಯುಷ್ಯಂ ಕರೋತಿ ಚ.”
ಅರ್ಥಾತ್ — ದೀಪಾವಳಿಯ ಪ್ರಭಾತದಲ್ಲಿ ಎಣ್ಣೆ ಹಚ್ಚಿ ಸ್ನಾನ ಮಾಡಿದವನು,
ಆರೋಗ್ಯ, ಆಯುಷ್ಯ ಮತ್ತು ಸುಖವನ್ನು ಪಡೆಯುತ್ತಾನೆ.
ಅಭ್ಯಂಗದ ಪ್ರಯೋಜನಗಳು :
- ರಕ್ತಸಂಚಾರ ಸುಧಾರಣೆ:
ಎಣ್ಣೆಯ ಮೃದುವಾದ ಮಸಾಜ್ ರಕ್ತಸಂಚಾರವನ್ನು ಸುಧಾರಿಸುತ್ತದೆ. ಇದರ ಫಲವಾಗಿ ಚರ್ಮಕ್ಕೆ ಕಾಂತಿ ಮತ್ತು ಜೀವಂತತೆ ಬರುತ್ತದೆ. - ನರ ಶಕ್ತಿ ವೃದ್ದಿ ಮತ್ತು ನಿದ್ರೆ:
ಅಭ್ಯಂಗವು ನರಮಂಡಲವನ್ನು ಶಾಂತಗೊಳಿಸಿ ನಿದ್ರೆ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ. ಹಾರ್ಮೋನ್ ಸಮತೋಲನ ಮತ್ತು ಮನಃಶಾಂತಿಗೆ ಸಹಕಾರಿಯಾಗುತ್ತದೆ. - ರೋಗನಿರೋಧಕ ಶಕ್ತಿ:
ಹವಾಮಾನದ ಬದಲಾವಣೆಯ ಸಮಯದಲ್ಲಿ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ. ಶೀತ, ಜ್ವರ ಹವಾಮಾನ ಬದಲಾವಣೆಯಿಂದಾಗುವ ಸಮಸ್ಯೆಗಳನ್ನು ತಡೆಯುತ್ತದೆ. - ಚರ್ಮ ಮತ್ತು ಸ್ನಾಯುಗಳ ಆರೋಗ್ಯ:
ಚರ್ಮದ ಒಣಗುವಿಕೆ ಹೋಗಿ ನೈಸರ್ಗಿಕ ಕಾಂತಿ ಹೆಚ್ಚುತ್ತದೆ. ಸ್ನಾಯುಗಳು ಮೃದುಗೊಂಡು, ದೇಹದ ನೋವು ನಿವಾರಣೆಯಾಗುತ್ತದೆ. - ಮನಸ್ಸಿನ ಶುದ್ಧತೆ:
ಅಭ್ಯಂಗ ಕೇವಲ ದೇಹಕ್ಕೆ ಎಣ್ಣೆ ಹಚ್ಚುವುದು ಅಲ್ಲ — ಅದು ಮನಸ್ಸಿನ ಮೇಲಿನ ಥೆರಪಿ ಕೂಡ ಆಗಿದೆ. ಎಣ್ಣೆಯ ಮೃದುವಾದ ಸ್ಪರ್ಶವು ಮನಸ್ಸಿನಲ್ಲಿನ ಅಶಾಂತಿ, ಆತಂಕ, ಕೋಪ ಹಾಗೂ ನಕಾರಾತ್ಮಕ ಚಿಂತನೆಗಳನ್ನು ನಿಧಾನವಾಗಿ ಕರಗಿಸುತ್ತದೆ. ಈ ಕ್ಷಣದಲ್ಲಿ ನಾವು ನಮ್ಮ ಶರೀರದೊಂದಿಗೆ ಪುನಃ ಸಂಪರ್ಕ ಹೊಂದುತ್ತೇವೆ. ಇದರಿಂದ ಮನಸ್ಸು ಹಗುರವಾಗಿ, ಆತ್ಮ ಶುದ್ಧವಾಗುತ್ತದೆ — ಅದೇ ನಿಜವಾದ “ಆರೋಗ್ಯ”ದ ಅರ್ಥ.
ದೀಪಾವಳಿಯ ಆಧ್ಯಾತ್ಮಿಕ ಅರ್ಥ — ಒಳಗಿನ ಕತ್ತಲೆಗೆ ಬೆಳಕಿನ ಸ್ಪರ್ಶ!
ದೀಪಾವಳಿಯ ಬೆಳಕನ್ನು ಕೇವಲ ದೀಪಗಳಲ್ಲಿ ಮಾತ್ರವಲ್ಲ, ನಮ್ಮೊಳಗಿನ ಅಂಧಕಾರದ ಮೇಲೆ ಬೆಳಕಿನ ವಿಜಯವಾಗಿಯೂ ನೋಡುವುದು.
ಅಭ್ಯಂಗ ಸ್ನಾನವು ಈ ಆಂತರಿಕ ಯಾತ್ರೆಯ ಪ್ರಾರಂಭವಾಗಿದೆ —
ಎಣ್ಣೆ ಹಚ್ಚುವುದು ಎಂದರೆ ನಮ್ಮೊಳಗಿನ ಕಠಿಣತೆ, ಅಹಂಕಾರ, ಅಸೂಯೆಗಳನ್ನು ಮೃದುಗೊಳಿಸುವುದು. ಸ್ನಾನ ಮಾಡುವುದು ಎಂದರೆ ನಕಾರಾತ್ಮಕ ಚಿಂತನೆಗಳು ಮತ್ತು ದುಷ್ಟ ಅಭಿಪ್ರಾಯಗಳನ್ನು ತೊಳೆದುಹಾಕುವುದು.
ಈ ರೀತಿಯಾಗಿ ಶರೀರ, ಮನಸ್ಸು ಮತ್ತು ಆತ್ಮ ಶುದ್ಧಗೊಂಡಾಗ,
ದೀಪಾವಳಿಯ ನಿಜವಾದ ಅರ್ಥ — ಹೊಸ ಬೆಳಕಿನ ಉದಯ — ಪೂರ್ಣವಾಗುತ್ತದೆ.
ಹರಿದ್ವರ್ಣದ ಸಂದೇಶ
ಈ ದೀಪಾವಳಿಯಲ್ಲಿ ಕೇವಲ ಮನೆಗೆ ಮಾತ್ರ ದೀಪ ಹಚ್ಚಬೇಡಿ, ನಮ್ಮೊಳಗಿನ ಒಳ್ಳೆಯತನದ ದೀಪವನ್ನೂ ಬೆಳಗಿಸೋಣ.
ಅಸೂಯೆ, ದ್ವೇಷ, ಅಹಂಕಾರಗಳ ಅಂಧಕಾರವನ್ನು ದೂರ ಮಾಡಿ,
ದಯೆ, ಪ್ರೀತಿ ಮತ್ತು ಸಾತ್ವಿಕತೆಯ ಬೆಳಕಿನಿಂದ ಬದುಕನ್ನು ತುಂಬಿಸೋಣ.
ಅಭ್ಯಂಗ ಸ್ನಾನದಂತಹ ಸರಳ ಆಚರಣೆಗಳೇ ದೇಹ ಮತ್ತು ಆತ್ಮದ ಪವಿತ್ರತೆಯ ಮೆಟ್ಟಿಲುಗಳು.
ಇದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ,
ಆರೋಗ್ಯ, ಶಾಂತಿ ಮತ್ತು ಸಂತೋಷ — ಇವು ಸ್ವಯಂ ನಮ್ಮ ಜೀವನದ ಭಾಗವಾಗುತ್ತವೆ.
–
ಡಾ. ಸುಶ್ರಾವ್ಯ ಮಂಜುನಾಥ್
BNYS, Functional Nutritionist



