ನೆತ್ತರು ಹರಿದಾಗ ಹಣ ತೆತ್ತರೂ ಬಾರದ ಪರಿಸ್ಥಿತಿ ಎದುರಾದಾಗ ಭಗವಂತ ನೀನೆ ನನ್ನ ಶಕ್ತಿ ಎಂದು ಮುಂದುವರೆಯ ಬೇಕಾದ ಅನಿವಾರ್ಯತೆ ತಲೆದೂರುತ್ತದೆ…. ಬಳಲಿ ಬೆಂಡಾಗಿ ಬಿಡಿಸಲಾಗದ ಕಗ್ಗಂಟಾಗಿ ಅಸಹಾಯಕನಾಗಿ ಬಿಡುವ ಸನ್ನಿವೇಶಗಳಿಗೇನು ಕೊರತೆಯಿಲ್ಲ.
ಪುರಾತನ ಕಾಲದಿಂದಲೂ ನಮ್ಮ ಪರಿಸರದಲ್ಲಿರುವ ಪ್ರತಿಯೊಂದು ನೈಸರ್ಗಿಕ ವಿಷಯಗಳನ್ನು ದೈವೀ ಭಾವನೆಯಿಂದ ನೋಡುತ್ತ ಬಂದಂತಹ ನಮ್ಮ ಭಾರತೀಯರಿಗೆ ಅಗ್ನಿ, ಜಲ, ವಾಯು, ಆಕಾಶ, ಭೂಮಿಯು ಆರೋಗ್ಯದಾಯಿನಿ ಎಂಬುದು ಹೊಸತೇನಲ್ಲ. ಆದರೂ ಸದ್ಬಳಕೆಯ ಅರಿವು ಕಡಿಮೆಯೇನೋ ಎನ್ನಿಸುವುದು. ನಾಟಿ ಔಷಧೀಯ ಪದ್ಧತಿಯು ಅಲ್ಲಲ್ಲಿ ಬಳಕೆಯಲ್ಲಿದ್ದರೂ ಅದನ್ನೇ ಮುಖ್ಯ ಔಷಧ ಅಥವಾ ವೈದ್ಯಕೀಯ ಪದ್ಧತಿಯನ್ನಾಗಿ ಅಳವಡಿಸುಕೊಳ್ಳುವಷ್ಟು ಜಾಣ್ಮೆ, ಮನಸ್ಥಿತಿ ಇನ್ನೂ ‘ನಮ್ಮಲ್ಲಿ ಜಾಗೃತವಾಗಿಲ್ಲ’.
ಜವಾಬ್ದಾರಿ ಹಾಗೂ ಕರ್ತವ್ಯ ಪ್ರಜ್ಞೆ ಮಿತಿಮೀರಿದಷ್ಟು ಮಾನವನ ಹಪಹಪಿಯ ಹಸಿವು ಹೆಚ್ಚಾಗುತ್ತಾ ಹೋಗುತ್ತದೆ. ಎಲ್ಲೆ ಎನ್ನುವುದು ಇರಬೇಕಾದಷ್ಟು ಇದ್ದಾಗ ಆರೋಗ್ಯಪೂರ್ಣ ಬದುಕು ನಮ್ಮದಾಗುತ್ತದೆ ಎನ್ನುವುದು ನನ್ನ ವಾದ. ಆದರೂ ‘ಇರುವುದೆಲ್ಲವ ಬಿಟ್ಟು ಇರುದುದರೆಡೆಗೆ ತುಡಿವುದೇ ಜೀವನ’ ಎಂಬ ಗೋಪಾಲಕೃಷ್ಣ ಅಡಿಗರ ಸಾಲುಗಳು ನಮ್ಮ ಜೀವನ ಶೈಲಿಗೆ ಕೇಳಿದ ಪ್ರಶ್ನೆ ಎಂಬಲ್ಲಿ ಸಂಶಯವಿಲ್ಲ.
ಪ್ರಕೃತಿಯನ್ನು ವಿಕೃತಿ ಮಾಡದೇ ಪ್ರಾಕೃತಿಕ ನಿಯಮದಂತೆ ಬದುಕಿದಾಗ ದೇಹ ಪ್ರಕೃತಿ ನಿಯಮದಂತೆ ಬಾಳುತ್ತದೆ. ಅಂತಹ ಬುದ್ಧಿವಂತಿಕೆಯ ಬದುಕು ಸಾಕಾರವಾಗಿ ಬಂಗಾರವಾಗಲಿ ಎಂಬುದು ಮನದಾಳದ ಆಶಯ.
ಬೇರೇನು ಬೇಡ ಈ ಬಡ ಜೀವಕೆ
ಆರೋಗ್ಯದ ಹನಿ ಸಿಂಚನವಾಗುತಿರಲಿ
ಇದ್ದು ಸಾಧಿಸುವ ಛಲ ನಿಶ್ಚಯವಾಗಲಿ
ಭೂಮಿಗೆ ಬಂದ ಕಾರಣ ಸಾಕಾರವಾಗಲಿ
— ಶ್ರೀಮತಿ ಮಾನಸ ಹೆಗಡೆ
ಶಿರಸಿ